ಇ - ತ್ಸಿಂಗ್
635-713. ಹೂಯೆನ್‍ತ್ಸಾಂಗನ ಅನಂತರ ಭಾರತಕ್ಕೆ ಬಂದ ಚೀನೀ ಬೌದ್ಧಯಾತ್ರಿಕರಲ್ಲಿ ಕೊನೆಯವ. ಏಳನೆಯ ವಯಸ್ಸಿನಲ್ಲಿ ಚೀನಿ ಭಾಷಾಧ್ಯಯನ ನಡೆಸಿದ. ಹನ್ನೆರಡನೆಯ ವಯಸ್ಸಿನಲ್ಲಿ ಇವನ ಶಿಕ್ಷಕನೊಬ್ಬ ನಿಧನನಾದಾಗ ಇವನ ಜೀವನದ ದಿಶೆ ಬದಲಿಸಿತು. ಗುರುವಿನ ಅಗಲುವಿಕೆಯಿಂದ ತುಂಬ ದುಃಖಕ್ಕೀಡಾಗಿ ಲೌಕಿಕ ಸಾಹಿತ್ಯಾಭ್ಯಾಸ ತ್ಯಜಿಸಿ ಬೌದ್ಧಸಾಹಿತ್ಯದ ಅಧ್ಯಯನ ನಡೆಸಿದ. ಹದಿನಾಲ್ಕನೆಯ ವಯಸ್ಸಿನಲ್ಲಿ ಶ್ರವಣನಾದ. ಚಿಕ್ಕಂದಿನಿಂದಲೂ ಭಾರತಕ್ಕೆ ಕ್ಷೇತ್ರಯಾತ್ರೆ ಕೈಗೊಳ್ಳಬೇಕೆಂದು ಆಶಿಸುತ್ತಿದ್ದನಾದರೂ 37ನೆಯ ವಯಸ್ಸಿನವರೆಗೂ ಅದು ಫಲಿಸಲಿಲ್ಲ.

	ಹತ್ತೊಂಬತ್ತು ವರ್ಷಗಳ ತನ್ನ ಯೌವನವನ್ನು ಬೌದ್ಧಗ್ರಂಥಗಳ ಅಧ್ಯಯನದಲ್ಲಿ ಕಳೆದ. ವಿನಯ, ಸೂತ್ರ. ಅಭಿಧರ್ಮಗಳನ್ನು ಆಳವಾಗಿ ಅಭ್ಯಸಿಸಿದ. 670ರಲ್ಲಿ ಭಾರತಕ್ಕೆ ಯಾತ್ರೆ ಹೊರಟ. 673ರಲ್ಲಿ ತಾಮ್ರಲಿಪ್ತಿಗೆ ಬಂದ. ಯಾತ್ರೆಯ ಮುಖ್ಯ ಉದ್ದೇಶ ಪವಿತ್ರ ಬೌದ್ಧ ಯಾತ್ರಾಸ್ಥಳಗಳನ್ನು ಸಂದರ್ಶಿಸುವುದು ಮತ್ತು ಬೌದ್ಧ ಧರ್ಮಗ್ರಂಥಗಳನ್ನು ಸಂಗ್ರಹಿಸುವುದು ಆಗಿತ್ತು. ಹೂಯೆನ್‍ತ್ಸಾಂಗನಂತೆ ಈತ ಭಾರತದ ಬಹುಭಾಗದಲ್ಲಿ ಸಂಚರಿಸಲಿಲ್ಲ. ಬುದ್ಧಗಯೆ, ನಲಂದ, ವೈಶಾಲಿ, ಶ್ರಾವಸ್ತಿ, ಕುಶಿನಗರ ಮತ್ತು ವಾರಾಣಸಿ ಮುಂತಾದವು ಈತ ಸಂದರ್ಶಿಸಿದ ಮುಖ್ಯಸ್ಥಳಗಳು. ತಾಮ್ರಲಿಪ್ತಿಯಲ್ಲಿ ಈತ ಮಹಾಯಾನ ಪ್ರದೀಪನೆಂಬುವನಿಂದ ಸಂಸ್ಕøತ ಕಲಿತು ವ್ಯಾಕರಣ ಅಭ್ಯಾಸ ಮಾಡಿದ. ನಲಂದದಲ್ಲಿ ಹತ್ತು ವರ್ಷ ಅಧ್ಯಯನ ಮಾಡಿ 400ಕ್ಕೂ ಹೆಚ್ಚು ಬೌದ್ಧಗ್ರಂಥಗಳನ್ನು ಸಂಗ್ರಹಿಸಿಕೊಂಡು ತಾಮ್ರಲಿಪ್ತಿಯ ಮುಖಾಂತರ ಸ್ವದೇಶಕ್ಕೆ ಮರಳಿದ.

	ತನ್ನ 25 ವರ್ಷಗಳ ಕ್ಷೇತ್ರಯಾತ್ರೆ ಮುಗಿಸಿ 695ರಲ್ಲಿ ಚೀನಕ್ಕೆ ಹಿಂತಿರುಗಿದಾಗ ಅಲ್ಲಿಯ ಚಕ್ರವರ್ತಿನಿ ಈತನಿಗೆ ಗೌರವದ ಸ್ವಾಗತ ನೀಡಿದಳು. ತನ್ನ ಜೀವಿತದ ಉಳಿದ ಭಾಗವನ್ನೆಲ್ಲ ಈತ ಬೌದ್ಧಗ್ರಂಥಗಳ ಭಾಷಾಂತರದಲ್ಲಿ ಕಳೆದ. 230 ಪುಟಗಳ 56 ಧರ್ಮಗ್ರಂಥಗಳನ್ನು ಭಾಷಾಂತರ ಮಾಡಿದ (700-712). ಅಲ್ಲದೆ ಬೇರೆ ಐದು ಗ್ರಂಥಗಳನ್ನು ಬರೆದ. ಇವುಗಳಲ್ಲಿ ಇವನ ಪ್ರವಾಸಕಥನವೂ ಒಂದು.

	ಇ-ತ್ಸಿಂಗ್ ಭಾರತಕ್ಕೆ ಬಂದುದು ಬೌದ್ಧಧರ್ಮಾಸಕ್ತಿಯಿಂದಾದುದರಿಂದ ಇವನ ಪ್ರವಾಸ ಕಥನದಲ್ಲಿ ಬೌದ್ಧರ ಆಚಾರ ವಿಚಾರಗಳಿಗೆ ಹೆಚ್ಚಿನ ಗಮನ ಕೊಟ್ಟಿದ್ದಾನೆ. ಆದರೂ ಇವನ ಕಥನ ಭಾರತೀಯ ಸಾಹಿತ್ಯಚರಿತ್ರೆಯ ಕಾಲಗಳನ್ನು ಗುರುತಿಸುವುದಕ್ಕೆ ಬಹು ಸಹಾಯಕವಾಗಿದೆ. ತನ್ನ ಕಥನದಲ್ಲಿ ಈತ ಭಾರತೀಯರು ಸ್ವಚ್ಛತೆಗೆ ನೈರ್ಮಲ್ಯಕ್ಕೆ ಮತ್ತು ಅತಿಥಿಸತ್ಕಾರಕ್ಕೆ ಕೊಟ್ಟಿದ್ದ ಪ್ರಾಶಸ್ತ್ಯವನ್ನು ವರ್ಣಿಸಿದ್ದಾನೆ.											(ಎಚ್.ಆರ್.)

	ಅಂದಿನ ಜ್ಞಾನಕೇಂದ್ರಗಳನ್ನು ಕುರಿತು ತನ್ನ ಕಥನದಲ್ಲಿ ಇ-ತ್ಸಿಂಗ್ ಹೀಗೆ ಹೇಳಿದ್ದಾನೆ: ಮಧ್ಯ ಇಂಡಿಯಾ ದೇಶದಲ್ಲಿರುವ ನಲಂದವೂ ಪಶ್ಚಿಮ ಇಂಡಿಯಾ ದೇಶದಲ್ಲಿರುವ ವಲ್ಲಭಿಯೂ ಜ್ಞಾನಕೇಂದ್ರಗಳು. ಇವು ಚೀನಾದೇಶದ ಚಿನ್-ಮಾ, ಶಿಹ್-ಚು, ಲುಂಗ್-ಮೀನ್ ಮತ್ತು ಚೂಯ್-ಲೀಗಳಿದ್ದಂತೆ. ಇಲ್ಲಿ ಹೆಸರಾಂತ ವಿದ್ವಾಂಸರು ತಂಡೋಪತಂಡವಾಗಿ ನೆರೆದು ಸಾಧ್ಯವಾದ ಹಾಗೂ ಅಸಾಧ್ಯವಾದ ತತ್ತ್ವಗಳನ್ನು ಚರ್ಚಿಸುತ್ತಾರೆ. ಅವರ ಅಭಿಪ್ರಾಯಗಳಲ್ಲಿ ಬಹು ಶ್ರೇಷ್ಠವಾದವುಗಳಿಗೆ ಬುದ್ಧಿವಂತರಾದವರಿಂದ ಅಂಗೀಕಾರ ಮುದ್ರೆ ಬಿದ್ದಮೇಲೆ ಮಾತ್ರ ಅವರು ತಮ್ಮ ಬುದ್ಧಿವಂತಿಕೆಗೆ ಹೆಸರಾಗುತ್ತಾರೆ. ತಮ್ಮ ಬುದ್ಧಿಚಾತುರ್ಯವನ್ನು ತೋರಿಸಲು ಅವರು ರಾಜನ ಆಸ್ಥಾನಕ್ಕೆ ಹೋಗಿ ಅಲ್ಲಿ ತಮ್ಮ ರಾಜಕೀಯ ಪ್ರತಿಭೆಯನ್ನು ಪ್ರದರ್ಶಿಸಿ ಆಡಳಿತದಲ್ಲಿ ತಮಗೆ ಸ್ಥಾನ ಬೇಕೆಂದು ಕೇಳುತ್ತಾರೆ. ಅವರು ಪಾಷಂಡ ತತ್ತ್ವಗಳನ್ನು ಖಂಡಿಸಲು ಪ್ರಾರಂಭಿಸಿದರೆ ಎದುರಾಳಿಗಳು ಆ ವಾದವನ್ನು ತುಟಿಪಿಟಕ್ಕೆನ್ನದೆ ಕೇಳಿ ತಮ್ಮ ಸೋಲನ್ನು ಒಪ್ಪಿಕೊಳ್ಳುತ್ತಾರೆ. ಈ ರೀತಿ ಜಯಗಳಿಸಿದವರ ಕೀರ್ತಿಯ ಜಯಭೇರಿ ಪಂಚಪರ್ವತಗಳಲ್ಲಿ ಮೊಳಗಿ ನಾಲ್ಕು ದಿಕ್ಕುಗಳಿಗೂ ಹರಡುತ್ತದೆ. ಇಂಥವರಿಗೆ ಭೂಮಿಯನ್ನು ದತ್ತಿ ಕೊಡುತ್ತಾರೆ. ಉನ್ನತ ಅಧಿಕಾರಗಳನ್ನೀಯುತ್ತಾರೆ. ಇಷ್ಟನ್ನು ಸಾಧಿಸಿದ ಮೇಲೆ ಅವರು ಯಾವ ವೃತ್ತಿಯನ್ನಾದರೂ ಅನುಸರಿಸಬಹುದು.							
(ಎಂ.ಎಸ್.) 

(ಪ್ರವಾಸಿ ಕಂಡ ಇಂಡಿಯ: ಎಚ್. ಎಲ್. ನಾಗೇಗೌಡ) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ